ಗೋಕರ್ಣದ ವಶಪಡಿಸಿಕೊಳ್ಳಲು ಸರಕಾರದ ಇಂಗಿತ


ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲಾಗಿರುವ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಮರಳಿ ತನ್ನ ವಶಕ್ಕೆ ಪಡೆಯುವ ವಿವಾದಾತ್ಮಕ ಇಂಗಿತವನ್ನು ರಾಜ್ಯ ಸರಕಾರ ಹೈಕೋರ್ಟ್ನಲ್ಲಿ ಶುಕ್ರವಾರ ವ್ಯಕ್ತಪಡಿಸಿದೆ. ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಸಂಸ್ಥಾನ ಮಹಾಬಲೇಶ್ವರ ದೇವರು ಟ್ರಸ್ಟ್ ಮತ್ತು ದೇವಸ್ಥಾನದ ಭಕ್ತರಾದ ಬಾಲಚಂದ್ರ ವಿಘ್ನೇಶ್ವರ ದೀಕ್ಷಿತ್ ಅವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಸರಕಾರ ಈ ಇಂಗಿತ ವ್ಯಕ್ತಪಡಿಸಿತು.

ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಾರ್ವಜನಿಕರಿಗೆ ಸೇರಿದ್ದು.

ಆದರೆ, 2008ರಲ್ಲಿ ಅಂದಿನ ಸರಕಾರ ಖಾಸಗಿ ಮಠಕ್ಕೆ ಹಸ್ತಾಂತರಿಸಿದೆ. ಸದ್ಯ ದೇವಾಲಯದಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತಿದೆ. ಆ ಹಣವೆಲ್ಲ ಮಠದ ಪಾಲಾಗುತ್ತಿದೆ. ಹೀಗಾಗಿ, ದೇವಾಲಯವನ್ನು ಮರಳಿ ಸರಕಾರದ ವಶಕ್ಕೆ ಪಡೆಯಲು ಆದೇಶಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ, ಅರ್ಜಿ ದಾರರ ಮನವಿ ಕುರಿತು ಸರಕಾರದ ನಿಲುವೇನು? ಎಂದು ವಿಚಾರಣೆಗೆ ಹಾಜರಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಎಂ.ಆರ್. ನಾಯಕ್ರನ್ನು ಪ್ರಶ್ನಿಸಿದರು. ಅಡ್ವೋಕೇಟ್ ಜನರಲ್ ಎಂ.ಆರ್. ನಾಯಕ್ ವಾದಿಸಿ, 2008ರಲ್ಲಿ ಅಂದಿನ ರಾಜ್ಯ ಸರಕಾರ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಹಸ್ತಾಂತರದ ಅನಂತರ ಮಠದ ವಿರುದ್ಧ ಸಾರ್ವಜನಿಕರಿಂದ ಸರಕಾರ ಹಾಗೂ ರಾಜ್ಯಪಾಲರಿಗೆ ದೂರುಗಳು ಬಂದಿವೆ. ಸದ್ಯ ಸರಕಾರ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅಗತ್ಯಬಿದ್ದರೆ ದೇವಾಲಯವನ್ನು ಮಠದಿಂದ ಮರಳಿ ಸರಕಾರದ ವಶಕ್ಕೆ ಪಡೆಯಬೇಕು ಎಂದು ಚಿಂತಿಸಲಾಗುತ್ತಿದೆ. ಆದರೆ, ಅದಕ್ಕೂ ಮುನ್ನ ಮತ್ತಷ್ಟು ಚರ್ಚೆ ನಡೆಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಿದೆ. ಆದ್ದರಿಂದ ಪ್ರಕರಣದ ಕುರಿತು ಕೋರ್ಟ್ಗೆ ಸರಕಾರದ ನಿಲುವು ತಿಳಿಸಲು ಎಂಟು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು.ಅಡ್ವೋಕೇಟ್ ಜನರಲ್ ಅವರ ಈ ಹೇಳಿಕೆಯನ್ನು ಆಕ್ಷೇಪಿಸಿದ ಮುಖ್ಯ ನ್ಯಾಯಮೂರ್ತಿಗಳು, ಮುಂದಿನ ವಿಚಾರಣೆಯ ವೇಳೆ ಪ್ರಕರಣದ ಕುರಿತು ಸರಕಾರದ ಸ್ಪಷ್ಟ ನಿಲುವು ತಿಳಿಸಬೇಕು ಎಂದು ನ್ಯಾಯಾಲಯ ಅರ್ಜಿಯ ಹಿಂದಿನ ವಿಚಾರಣೆ ವೇಳೆ ನಿರ್ದೇಶಿಸಿತ್ತು. ಆದರೆ, ಈಗ 8 ವಾರ ಕಾಲಾವಕಾಶ ಕೋರುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು. ಜತೆಗೆ, ಎಂಟು ವಾರ ಕಾಲಾವಾಶ ನೀಡಲು ಸಾಧ್ಯವಿಲ್ಲ, ಕೇವಲ ಆರು ವಾರ ಕಾಲಾವಕಾಶ ನೀಡಲಾಗುವುದು ಎಂದು ತಿಳಿಸಿದರು. ಅಲ್ಲದೆ, ಮುಂದಿನ ವಿಚಾರಣೆ ವೇಳೆ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠದ ಸುಪರ್ದಿಯಿಂದ ಮರಳಿ ಸರಕಾರ ವಶಕ್ಕೆ ಪಡೆಯಲಾಗುತ್ತದೆಯೇ? ಅಥವಾ ದೇವಾಲಯವನ್ನು ಮಠದ ಸುಪರ್ದಿಯಲ್ಲಿಯೇ ಮುಂದುವರಿಸಲಾಗುತ್ತದೆಯೇ? ಎಂಬುದರ ಬಗ್ಗೆ ಖಚಿತ ನಿಲುವು ತಿಳಿಸಬೇಕು ಎಂದು ಅಡ್ವೋಕೇಟ್ ಜನರಲ್ ಎಂ.ಆರ್.ನಾಯಕ್ ಅವರಿಗೆ ಮುಖ್ಯ ನ್ಯಾಯಮೂರ್ತಿಗಳು ತಾಕೀತು ಮಾಡಿ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿದರು.

ಪ್ರಕರಣವೇನು?
ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು 2008ರ ಆಗಸ್ಟ್ನಲ್ಲಿ ಅಂದಿನ ರಾಜ್ಯ ಸರಕಾರ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿತ್ತು. ದೇವಾಲಯವು ಸಾರ್ವಜನಿಕರಿಗೆ ಸೇರಿದ್ದಾಗಿದೆ. ಆದರೆ, ಖಾಸಗಿ ಮಠಕ್ಕೆ ಹಸ್ತಾಂತರಿರುವುದು ಈ ಕ್ರಮ ಕಾನೂನು ಬಾಹಿರ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿದೆ.

ಗೋಕರ್ಣ ದೇಗುಲ ಮಠದ ಆಸ್ತಿ ಎನ್ನುತ್ತಿದ್ದ ಸರಕಾರ ಉಲ್ಟಾ’ ನಿಲುವು ದಿಢೀರ್ ಬದಲಾಗಿದ್ದಕ್ಕೆ ಕಾರಣ ಏನು?: ವಕೀಲರು
ಗೋಕರ್ಣ ದೇವಾಲಯ ಸರಕಾರದ ಆಸ್ತಿಯಲ್ಲ. ಇದು ಮಠದ ಆಸ್ತಿಯೇ. ಇದನ್ನು ಸರಕಾರದ ದೇಗುಲ ಎಂದು ತಪ್ಪಾಗಿ ನಮೂದಿಸಲಾಗಿತ್ತು. ಈ ಲೋಪವನ್ನು ಸರಿಪಡಿಸಿ ಗೋಕರ್ಣ ದೇಗುಲವನ್ನು ಮಠದ ಉಸ್ತುವಾರಿಗೆ ಮರಳಿಸಲಾಗಿದೆ ಎಂದು ಈ ಪ್ರಕರಣ ದಾಖಲಾದ ಇಷ್ಟೂ ವರ್ಷ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟುಗಳಲ್ಲಿ ಸರಕಾರ ಅಧಿಕೃತವಾಗಿ ಹೇಳಿತ್ತು. ಆದರೆ, ಶುಕ್ರವಾರ ದಿಢೀರನೆ ಸರಕಾರ ಉಲ್ಟಾ ಹೊಡೆದಿರುವುದು ಅಚ್ಚರಿ ಮೂಡಿಸಿದೆ ಎಂದು ಮಠದ ವಕೀಲರು ಹೇಳಿದ್ದಾರೆ. ಇದು ಮಠದ ದೇಗುಲವೇ ಎಂಬ ಬಗೆಗಿನ ಎಲ್ಲ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. ಇದಕ್ಕೆ ಸರಕಾರದ ವಿರೋಧವೂ ಇರಲಿಲ್ಲ. ಆದರೆ, ಈಗ ಸರಕಾರ ವರಸೆ ಬದಲಾಯಿಸಿರುವುದರ ಮರ್ಮವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಗೋಕರ್ಣ ದೇಗುಲದಿಂದ ಮಠಕ್ಕೆ ನಯಾ ಪೈಸೆ ಆದಾಯವಿಲ್ಲ. ದೇಗುಲದ ಆದಾಯವನ್ನು ದೇವಾಲಯಕ್ಕೇ ವೆಚ್ಚ ಮಾಡಲಾಗುತ್ತಿದೆ. ದೇಗುಲ ಅಭಿವೃದ್ಧಿಗೆ ಮಠದಿಂದಲೇ ಸಾಕಷ್ಟು ವೆಚ್ಚ ಮಾಡಲಾಗಿದೆ. ಈಗ ದೇಗುಲ ಹಿಂದೆಂದಿಗಿಂತ ಹೆಚ್ಚು ವ್ಯವಸ್ಥಿತವಾಗಿದ್ದು ಭಕ್ತಾದಿಗಳಿಗೆ ಸಾಕಷ್ಟು ಅನುಕೂಲಕರ ವಾತಾವರಣ ಕಲ್ಪಿಸಲಾಗಿದೆ. ಇದರಿಂದ, ಕೆಲವು ವ್ಯಕ್ತಿಗಳ ಸ್ವಹಿತಾಸಕ್ತಿಗೆ ಧಕ್ಕೆಯಾಗಿರುವ ಪರಿಣಾಮ ಶ್ರೀಗಳ ಮೇಲೆ ಒಂದಲ್ಲೊಂದು ಕುತಂತ್ರ ಹೂಡಿ ದೇವಾಲಯವನ್ನು ಮತ್ತೆ ತಮ್ಮ ಸುಪರ್ದಿಗೆ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೊದಲು ಗೋಕರ್ಣ ದೇವಾಲಯ ಕುರಿತಂತೆ ಮಾಜಿ ಅಡ್ವೋಕೇಟ್ ಜನರಲ್ ಬಿ. ವಿ. ಆಚಾರ್ಯ ವಾದಿಸುತ್ತಿದ್ದರು. ಈಗ ಅವರನ್ನು ಕೈಬಿಟ್ಟು ಹಾಲಿ ಅಡ್ವೋಕೇಟ್ ಜನರಲ್ ಸ್ವತಃ ಬಂದು ಈವರೆಗಿನ ಸರಕಾರಿ ವಾದವನ್ನೇ ಉಲ್ಟಾ ಮಾಡುತ್ತಿದ್ದಾರೆ. ಸರಕಾರ ಕೋರ್ಟಿನಲ್ಲಿ ಸಲ್ಲಿಸಿರುವ ತನ್ನ ಪ್ರಮಾಣಪತ್ರ ಹಾಗೂ ವಾದವನ್ನು ಬದಲಾಯಿಸುವುದರ ಹಿಂದೆ ಷಡ್ಯಂತ್ರವಿದೆ ಎಂದೂ ಭಕ್ತರು ಆರೋಪಿಸಿದ್ದಾರೆ.

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s